Saturday, March 22, 2014

ನಾಯಕನಹಟ್ಟಿ: ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ರಥೋತ್ಸವ 19-March-2014

 
 
 



ನಾಯಕನಹಟ್ಟಿ: ಸುಪ್ರಸಿದ್ಧ, ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ರಥೋತ್ಸವವು ಬುಧವಾರ ಮಧ್ಯಾಹ್ನ 3 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಬೆಳಗ್ಗೆ 10 ಗಂಟೆಗೆ ಚಿಕ್ಕ ರಥೋತ್ಸವವು ಜರುಗಿ ನಂತರ ಉತ್ಸವ ಮೂರ್ತಿಯನ್ನು ಒಳಮಠದಿಂದ ಪಲ್ಲಕ್ಕಿಯಲ್ಲಿ ಸಕಲ ವಿಧಿ-ವಿಧಾನಗಳೊಂದಿಗೆ ಮೆರವಣಿಗೆಯ ಮುಖಾಂತರ ರಥದ ಮುಭಾಗಕ್ಕೆ ಸಾಗಿ ಬಂದು ಅನ್ನಬಲಿ ಹಾಕಿ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತಳಕು, ಮನ್ನೇಕೋಟೆ ಹಾಗೂ ನಾಯಕನಹಟ್ಟಿ ಭಕ್ತರು ಮಹಾ ಮಂಳಾರತಿಯೊಂದಿಗೆ ರಥಕ್ಕೆ ಚಾಲನೆ ನೀಡಲಾಯಿತು.

ತೇರು ಬೀದಿಯಿಂದ ಪಾದಗಟ್ಟೆಯವರೆಗೂ ಚಲಿಸಿ ಅಲ್ಲಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ಹೊರಟು ಪುನಃ ರಥದ ಸ್ಥಳಕ್ಕೆ ಆಗಮಿಸಿ ನೆಲೆ ನಿಂತಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಮೆಣಸು, ಬೆಲ್ಲ ತೂರಿ ತಮ್ಮ ಹರಕೆ ತೀರಿಸಿದರು.

ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಹಲವರು ಹರಕೆ ತೀರಿಸಿದರು. ನಂದಿಕೋಲು ಕರಡಿ ಮಜಲು, ಕೋಲಾಟ ಮತ್ತಿತರೆ ಜಾನಪದ ಕಲಾವಿದರೊಂದಿಗೆ ತನ್ನ ವಿಶಿಷ್ಟ ಕಲಾ ಪ್ರದರ್ಶನದೊಂದಿಗೆ ಜಾತ್ರೆಯಲ್ಲಿ ಮೆರಗು ಮೂಡಿಸಿತ್ತು.

ಮುಕ್ತಿ ಬಾವುಟ ಹರಾಜು:  ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವಕ್ಕೆ ಚಾಲನೆ ದೊರೆಯುವುದಕ್ಕಿಂತ ಮುಂಚೆ ಬಾವುಟವನ್ನು ಹರಾಜು ಮಾಡಲಾಯಿತು. 18,50,000 ಚಿತ್ರದುರ್ಗದ ಶ್ರೀನಿವಾಸ ಶೆಟ್ಟಿ ಅವರು ಹರಾಜಿನಲ್ಲಿ ಬಾವುಟ ಪಡೆದರು.

ವಸ್ತು ಪ್ರದರ್ಶನ:  ವಿವಿಧ ಇಲಾಖೆಗಳಿಂದ ಜಾತ್ರೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಿದ್ದರು. ಕೃಷಿ ಇಲಾಖೆಯಲ್ಲಿ ರೈತರಿಗೆ ದೊರೆಯುವಂತಹ ಉಪಕರಣಗಳು ಸಾವಯವ ಕೃಷಿ ಪದ್ಧತಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸೂಕ್ತ ನೀರು ಸರಬರಾಜು ವ್ಯವಸ್ಥೆಯ ಕೊರತೆ ಕಂಡುಬಂತು. ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿತ್ತು. ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದರು.

ಜಾತ್ರೆಗೆ ಜನಸಾಗರ: ಸುಡುವ ಬಿಸಿಲಿದ್ದರೂ ಸಹ ಹಟ್ಟಿ ತಿಪ್ಪೇಶನ ರಥೋತ್ಸವಕ್ಕೆ ನಾಯಕನಹಟ್ಟಿಗೆ ಈ ಬಾರಿ ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಭಕ್ತರು ಆಗಮಿಸಿದ್ದರು. ಈ ಬಾರಿ ಭಕ್ತರು ಸರಾಗವಾಗಿ ಹೋಗಿ ಬರಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿತ್ತು.

ಸುತ್ತಲೂ ಒಂದು ಕಿ.ಮೀ. ಅಂತರದಲ್ಲಿ ನಾಯಕನಹಟ್ಟಿಗೆ ಬರುವ ಎಲ್ಲಾ ಮಾರ್ಗಗಳನ್ನು ಮುಚ್ಚಿ ಕೇವಲ ಜನರಿಗೆ ಮಾತ್ರ ಒಳ ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ದೂರದಲ್ಲಿಯೇ ವಾಹನಗಳ ನಿಲುಗಡೆಗೊಳಿಸಲಾಗಿತ್ತು. ಇದರಿಂದಾಗಿ ಜಾತ್ರೆಗೆ ಬರುವ ಭಕ್ತರು ಸುಮಾರು 2 ಕಿ.ಮೀ.ನಷ್ಟು ದೂರ ನಡೆದುಕೊಂಡೇ ಬರಬೇಕಿತ್ತು.

ಮಕ್ಕಳು ಮರಿ, ವೃದ್ಧರೂ ಪ್ರಯಾಸದಿಂದ ದೇವಸ್ಥಾನ ತಲುಪುವಂತಾಗಿತ್ತು. 8 ಕಡೆ ತಪಾಸಣೆ ಕೇಂದ್ರಗಳನ್ನು ಮಾಡಲಾಗಿದೆ. ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಶ್ವಾನ ದಳ, ಬಾಂಬು ನಿಷ್ಕ್ರಿಯ ದಳವೂ ಸಹ ಆಗಮಿಸಿ ವಿವಿಧ ಕಡೆ ಸ್ಥಳ ಪರಿಶೀಲನೆ ನಡೆಸಿತು.

ಸುಡುವ ಬಿಸಿಲಿನ ಜಳದಿಂದ ತಂಪಾಗಲು ಭಕ್ತರು ಎಳನೀರು, ತಂಪು ಪಾನೀಯಕ್ಕೆ ಮುಗಿ ಬೀಳುತ್ತಿದ್ದರು. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ದೂರದಿಂದ ಭಕ್ತರು ಸಾಲುಗಟ್ಟಿದ್ದರು. ಇದಕ್ಕೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿ ಬಿಗಿ ಕ್ರಮ ಕೈಗೊಂಡಿದ್ದರು. ಜಾತ್ರೆಯಲ್ಲಿ ಖಾರ ಮಂಡಕ್ಕಿ ಬೆಂಡು, ಬತ್ತಾಸು, ಸಿಹಿ ತಿನಿಸುಗಳ ವ್ಯಾಪರ ಭರ್ಜರಿಯಾಗಿ ನಡೆಯಿತು.

ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ತೊಂದರೆಗಳು ಕಂಡುಬಂದವು. ಭಕ್ತರಿಗೆ ಸೂಕ್ತ ಶೌಚಾಲಯಗಳು ಸಿಗದೇ ಪರದಾಡುವಂತಾಗಿತ್ತು. ಜಾತ್ರೆ ಹಿನ್ನೆಲೆ ರೇಖಲಗೆರೆ ರಸ್ತೆ ಸರಿಪಡಿಸದೇ ಇದ್ದು ರಸ್ತೆಯಲ್ಲಿ ಆಳುದ್ದದ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದಾಗಿ ಆಟೋ ಇನ್ನಿತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. 

No comments:

Post a Comment